ಒತ್ತಡ ವರ್ಧಕ: ಹೆಚ್ಚು ಪ್ರಮಾಣದ, ಆದರೆ ಕಡಿಮೆ ಒತ್ತಡದ ನೀರಿನಲ್ಲಿರುವ ಶಕ್ತಿಯನ್ನು ಉಪಯೋಗಿಸಿಕೊಂಡು, ನೀರಿನ ಒತ್ತಡವನ್ನು ವರ್ಧಿಸಲು ಬಳಸುವ ಸಾಧನ (ಇನ್ಟೆನ್ಸಿಫೈಯರ್). ಜಲಶಕ್ತಿಯಿಂದ ಚಲಿಸುವ ಯಂತ್ರಗಳಿಗೆ ಒದಗಿಸಲಾಗುವ ನೀರಿನ ಒತ್ತಡ ಕಡಿಮೆ ಇದ್ದರೆ, ಇಂಥ ಸಾಧನಗಳಿಂದ ಒತ್ತಡವನ್ನು ಹೆಚ್ಚಿಸಿಕೊಳ್ಳಬಹುದು. ಒತ್ತಡ ವರ್ಧಕದ ಜೋಡಣೆಯನ್ನು ಚಿತ್ರದಲ್ಲಿ ಕಾಣಿಸಿದೆ. ಸ್ಥಾಯೀ ಬೆಣೆಯ ಮಧ್ಯದಲ್ಲಿರುವ ರಂಧ್ರದ ಮೂಲಕ ಹೆಚ್ಚು ಒತ್ತಡದ ನೀರು ಹೊರಭಾಗದಲ್ಲಿ ಮೇಲಕ್ಕೂ ಕೆಳಕ್ಕೂ ಓಡಾಡಬಲ್ಲ ಒಂದು ಆಡಬೆಣೆ ಇದೆ. ಇದರ ಒಳಭಾಗ ಪೊಳ್ಳು. ಇದರೊಳಗೆ ಒತ್ತಡದ ನೀರು ತುಂಬಿದೆ. ಕಡಿಮೆ ಒತ್ತಡದ ನೀರು ತುಂಬಿರುವ ಇನ್ನೊಂದು ಸ್ಥಿರ ಸಿಲಿಂಡರು ಆಡುಬೆಣೆಯ ಹೊರಗಡೆ ನಿಲ್ಲುವ ಹಾಗೆ ಏರ್ಪಡಿಸಿದೆ; ಕಡಿಮೆ ಒತ್ತಡದ ನೀರು ಆಡುಬೆಣೆಯ ಮೇಲ್ಭಾಗವನ್ನು ಒತ್ತುತ್ತದೆ. ಇದರಿಂದ ಆಡುಬೆಣೆ ಕೆಳಗೆ ಇಳಿಯುತ್ತದೆ. ಆಗ ಹೆಚ್ಚು ಒತ್ತಡದ ನೀರು ಸ್ಥಾಯೀ ಬೆಣೆಯ ರಂಧ್ರದ ಮೂಲಕ ಹೊರಬರುತ್ತದೆ.
ಆಡುಬೆಣೆ ತೀರ ಕೆಳಗೆ ಇಳಿದು ತನ್ನ ಹೊಡೆತದ ಕೊನೆಯಲ್ಲಿರುವಾಗ ಹೆಚ್ಚು ಒತ್ತಡದ ನೀರನ್ನು ಒಳಗೆ ಬಿಡುವ ಕವಾಟ ಮುಚ್ಚಿಕೊಳ್ಳುತ್ತದೆ. ಅನಂತರ ಕಡಿಮೆ ಒತ್ತಡದ ನೀರು ಆಡುಬೆಣೆಯ ಒಳಗೆ 
[ಹೆಚ್ಚು ಒತ್ತಡದ ತೀವ್ರತೆ]
                       [ಆಡುಬೆಣೆಯ ಹೊರಭಾಗದ ವಿಸ್ತೀರ್ಣ]
= [ಕಡಿಮೆ ಒತ್ತಡದ ತೀವ್ರತೆ] x  ____________________________
                           [ಸ್ಥಾಯೀ ಬೆಣೆಯ ವಿಸ್ತೀರ್ಣ]  
ನುಗ್ಗುತ್ತದೆ. ಆಗ ಸ್ಥಿರ ಸಿಲಿಂಡರಿನ ರಂಧ್ರ ಹೊರಗಡೆಗೆ ತೆರೆದಿರುವುದರಿಂದ ಆಡುಬೆಣೆ ಮೇಲೆ ಏಳುವುದು; ಮತ್ತು ತನ್ನ ಹೊಡೆತದ ಮೇಲ್ಭಾಗವನ್ನು ತಲಪಿದಾಗ ಹೆಚ್ಚು ಒತ್ತಡದ ನೀರನ್ನು ಯಂತ್ರದೊಳಗೆ ಬಿಡುವ ಕವಾಟ ತೆರೆಯುತ್ತದೆ. ಅಲ್ಲದೆ ಕಡಿಮೆ ಒತ್ತಡದ ನೀರನ್ನು ಆಡುಬೆಣೆಯ ಒಳಗಡೆ ಬಿಡುವ ಕವಾಟ ಮುಚ್ಚಿಕೊಳ್ಳುತ್ತದೆ. ಅದೇ ಸಮಯದಲ್ಲಿ ಸ್ಥಿರ ಸಿಲಿಂಡರಿಗೂ ಹೊರಗಡೆಗೂ ಇರುವ ಸಂಬಂಧ ತಪ್ಪಿ ಹೋಗುತ್ತದೆ; ಮತ್ತು ಜಲಯಂತ್ರಗಳಿಗೆ ನೀರು ಪುರೈಸುವ ಪ್ರಧಾನ ನಳಿಗೆಯೊಳಗಿನ ನೀರು ಸ್ಥಿರ ಸಿಲಿಂಡರಿನೊಳಗೆ ತುಂಬಿಕೊಳ್ಳುತ್ತದೆ. ಆಗ ನೀರಿನ ಒತ್ತಡದಿಂದ ಆಡುಬೆಣೆ ಕೆಳಗೆ ಇಳಿದು ವರ್ಧಿಸಿದ ಒತ್ತಡದ ನೀರನ್ನು ಯಂತ್ರಗಳೊಳಗೆ ನೂಕುತ್ತದೆ. ಹೀಗೆ ಏಕಮುಖವಾದ ಚಲನೆಯುಳ್ಳ ಈ ವರ್ಧಕಗಳು ತಮ್ಮ ಕೆಳಗಿನ ಹೊಡೆತದಲ್ಲಿ ಮಾತ್ರ ಹೆಚ್ಚು ಒತ್ತಡದ ನೀರನ್ನು ಒದಗಿಸಬಲ್ಲವು. ಈ ವರ್ಧಕಗಳಿಂದ ನೀರಿನ ಒತ್ತಡದ ತೀವ್ರತೆಯನ್ನು ಪ್ರತಿ ಚದರಂಗುಲಕ್ಕೆ 10 ಟನ್ನುಗಳಷ್ಟು ಹೆಚ್ಚು ಮಾಡಬಹುದು. ದ್ವಿಮುಖ ಚಲನೆಯುಳ್ಳ ವರ್ಧಕಗಳು ನಿರಂತರವಾಗಿ ಹೆಚ್ಚು ಒತ್ತಡದ ನೀರನ್ನು ಒದಗಿಸಬಲ್ಲವು.	(ಬಿ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ